Cancel Preloader

ಸುಳ್ಳಿನ ಗೋಡೆ

 ಸುಳ್ಳಿನ ಗೋಡೆ

ಸುಳ್ಳಿನ ಗೋಡೆಯ ಕಟ್ಟಿ ಬದುಕ ನಡೆಸಲಾಗದು ಗೆಳತಿ
ಬಯಕೆ ಬೇಕುಗಳ ಮೀರಿ ನೀನಾಗು ಸತ್ಯಗಳ ಒಡತಿ
ಕಂಡ ನೂರು ಕನಸುಗಳು ಮಣ್ಣಿನ ಪಾಲಾಯ್ತು
ಹೆಣ್ಣಾಗಿ ಜನಿಸಿದಕೆ ತ್ಯಾಗದ ಲೇಪನವಾಯ್ತು//

ಬಣ್ಣ ಬಳಿಯುವರು ನಗು ಮುಖವ ತೋರಿಸಲು
ಸನಿಹಕೆ ಬಂದು ಕೆನ್ನೆ ಚಿವುಟುವರು ಸದಾ ನಗುತಿರು ಎನ್ನುವರು
ಅಳಬಾರದು ನೀನು ತಾಯಿಯಾಗಿರುವೆ ಈಗ
ಸಹನೆಯೇ ನಿನ್ನ ಮೂಲಮಂತ್ರವಾಗಲಿ ಬೇಗ//

ಗಂಡನ ನಡವಳಿಕೆ ನೋವು ತರಬಹುದು ನಿನಗೆ
ಎಲ್ಲವನೂ ಸ್ವೀಕರಿಸು ದೂರದಿರು ಹೊರಗೆ
ಮನೆಯೊಳಗಣ ಗುಟ್ಟು ರಟ್ಟಾಗಂತೆ ಕಾಯುತಿರು
ಮಾತಿನ ನಡುವೆಯೂ ಪತಿಯ ನೀ ಆಡಿಕೊಳ್ಳದಿರು//

ನಾಲಿಗೆಯ ಕಚ್ಚಿಕೋ, ಬಾಯಿಯನು ಮುಚ್ಚಿಕೋ
ಹದ್ದು ಮೀರಿದ ಮಾತನಾಡದಿರು ಗೆಳತಿ
ಲಕ್ಷ್ಮಣನ ರೇಖೆಯ ದಾಟಿ ಹೊರಹೆಜ್ಜೆ ಹಾಕದಿರು
ಲಕ್ಷಣಗಳ ಕರಗಿಸಿ ನಡೆಯದಿರು ಗೆಳತಿ//

ಕರುಳಕುಡಿಗಳು ಬಂದು ಕಾಲಿಗೆ ಸುತ್ತುವವು
ನೆಲಕಚ್ಚಿ ಬೇರೂರಿ ನೀ ಬಾಳು ಗೆಳತಿ
ಮಕ್ಕಳ ಏಳಿಗೆಯ ನೀ ನೋಡಿ ಹರುಷಪಡು
ಮಮತೆಯ ಹೊಳೆಹಾಲ ಹರಿಸುತಿರು ಗೆಳತಿ//

ಹಳೆಯ ಆಲದ ಮರವು ನೀನಾಗಬೇಕೀಗ
ನೆಳಲು ನೀಡುತ ಹರು ಪಡಬೇಕು ಗೆಳತಿ
ಮಣ್ಣಿನಲಿ‌ ಮಣ್ಣಾಗಿ‌ ಹೋಗುವುದು ಈ ದೇಹ
ಮಮಕಾರದ ಘಮವು ಮಾಸದು ಗೆಳತಿ//

  • ಸಿಂಧು ಭಾರ್ಗವ್
    ಬೆಂಗಳೂರು

beladingalabutti