Cancel Preloader

ಗೊಲ್ಲ ಮತ್ತು ತೋಳ

 ಗೊಲ್ಲ ಮತ್ತು ತೋಳ

ಗೊಲ್ಲನೊಬ್ಬ
ತೋಟದೊಳಗೆ
ಕುರಿಯ ಮಂದೆ ಹಾಕಿದ |
ಭಾರ ಹೊರಲು
ಕತ್ತೆ ಹಿಂಡು
ಎತ್ತು ಕುದುರೆ ಸಾಕಿದ ||

ಬೇಟೆಗೆಂದು
ನಾಯಿ ತಂದು
ಚತುರ ಸುಂಕು ಕಲಿಸಿದ |
ಎಲ್ಲ ಸೇರಿ
ಕೂಡಿ ಬಾಳ್ವ
ಪ್ರೇಮವನ್ನು ಬೆಳೆಸಿದ ||

ನಿತ್ಯ ತಾನು
ಬೇಗ ಎದ್ದು
ಕುರಿಯ ಕಾಯತೊಡಗಿದ|
ಸಂಜೆಯೊಳಗೆ
ಮರಳಿ ಬಂದು
ತನ್ನ ಗೂಡ ಸೇರಿದ ||

ಒಂದು ಇರುಳು
ಹೊಂಚು ಹಾಕಿ
ತೋಳವೊಂದು ಬಂದಿತು|
ರೊಪ್ಪದೊಳಗೆ
ಇದ್ದ ಕುರಿಯ
ಮರಿಯ ನೋಡಿ ನಲಿಯಿತು||

ಇಂದು ಎನಗೆ
ಹೊಟ್ಟೆ ತುಂಬಾ
ರುಚಿಯ ಬೇಟೆ ಎನ್ನುತ|
ಓಡಿ ಬಂದು
ಮರಿಯ ಮೇಲೆ
ಹಲ್ಲು ನೆಟ್ಟು ಎರಗಲು||

ನಿದ್ರಿಸಿದ್ದ
ನಾಯಿ ತಾನು
ಒಂದೇ ಸಮನೆ ಬೊಗಳಲು|
ಕತ್ತೆ ಕೂಡ
ಎದ್ದು ನಿಂತು
ಕಾಲು ಕೊಡವಿ ಅರಚಿತು||

ಶಬ್ಧ ಕೇಳಿ
ಗೊಲ್ಲ ತನ್ನ
ಡೇರೆಯಿಂದ ಬಂದನು|
ಸುತ್ತಮುತ್ತ
ಹುಡುಕಿ ಒಂದು
ಭಾರೀ ಕೋಲು ತಂದನು||

ಬೀಸಿ ಒಮ್ಮೆ
ಕಾಲು ತಲೆಗೆ
ಸಿಟ್ಟಿನಿಂದ ಹೊಡೆಯಲು|
ಕೋಲು ತಗುಲಿ
ಮುರಿದು ಕಾಲು
ಕುಂಟು ತೋಳವಾಯಿತು||

ಬಂದ ದಾರಿ
ಸುಂಕವಿಲ್ಲ
ಎಂದು ಹೆದರಿ ತೋಳವು|
ಬೆಪ್ಪು ಮೋರೆ
ಹಾಕಿಕೊಂಡು
ತನ್ನ ದಾರಿ ಹಿಡಿಯಿತು ||

ಗಾಯಗೊಂಡ
ಕುರಿಯ ಮರಿಯು
ಮರಳಿ ಮಡಿಲ ಸೇರಿತು |
ಅಂದಿನಿಂದ
ಗೊಲ್ಲ ಮುಂದೆ
ಜಾಗರೂಕನಾದನು ||

ತೇಜಾವತಿ ಹೆಚ್. ಡಿ (ಖುಷಿ)
ಶಿಕ್ಷಕರು ತುಮಕೂರು

beladingalabutti