ಅಜರಾಮರ
ಸತ್ಯಕೆ ಕನ್ನಡಿ ಹಿಡಿದರೆ
ಇವನದೆ ಪ್ರತಿರೂಪ
ದೀನರ ಬಾಳನು
ಬೆಳಗಿದನಿವ ನಂದಾದೀಪ
ಬೆಳಕೆರೆವ ಹಣತೆ ಸುತ್ತಲೂ
ತುಂಬಿದೆ ಬಡಗತ್ತಲು
ದೀನತೆಯ ಚಿಂದಿಬಾಳ ಕಂಡು
ಈತ ಅರೆ ಬೆತ್ತಲು
ಈ ನೆಲದ ಬಸಿರಲಿ
ಚಿಲುಮೆ ಒಡೆದ ಒರತೆ
ಬಡ ದಾಹ ನೀಗಿಸಿದ
ಮಹದೊಲ್ಮೆಯಂತೆ
ಸತ್ಯದ ಚರಕ ಹಿಡಿದು
ಅಹಿಂಸಾ ನೂಲನು ಎಳೆದು
ಕಾಯಕ ಯೋಗಿ
ಧರ್ಮ ವ ಮೀರಿ
ಅಜರಾಮರನಿವನು
ಕಾವಿಯುಟ್ಟು ತಪಗೈದು
ಜಪಮಣಿ ಎಣಿಸಲಿಲ್ಲ
ಕತ್ತಿ ಕೋವಿ ಗುಂಡು ಹಿಡಿದು
ವೀರನೆನಿಸಲಿಲ್ಲ
ಬಡ ಬೆತ್ತಲ ಗುಂಡಿಗೆಯೂ
ಕಣ್ಣ ಕುಕ್ಕಿತು
ಕರಗದ ವಿಷ ಪಿತೂರಿಗೆ
ಉರುಳಿತು ಕಾಯ
ಅಳಿಯದ ಆತ್ಮ
ಪ್ರತಿ ಉಸಿರಲು ಬೆರೆತಿದೆ ಎಂದೆಂದಿಗೂ..